ಶಿರಹಟ್ಟಿ: ತಾಲೂಕಿನಾದ್ಯಂತ ಮಂಗಳವಾರ ಸೀಗೆ ಹುಣ್ಣಿಮೆ ಹಬ್ಬವನ್ನು ರೈತ ಬಾಂಧವರು ಸಡಗರ ಸಂಭ್ರಮದೊಂದಿಗೆ ಆಚರಿಸಿದರು.ರೈತರು ಜಮೀನಿನಲ್ಲಿ ಬನ್ನಿ ಮಹಾಂಕಾಳೆಗೆ ಹಾಗೂ ಕೌರವರು, ಪಾಂಡವರ ಹೆಸರಿನಲ್ಲಿ ಕಲ್ಲಿನ ಮೂರ್ತಿಗಳಿಗೆ ಮತ್ತು ಭೂತಾಯಿಗೆ ಪೂಜೆ ಸಲ್ಲಿಸಿದರು
.

ಪ್ರತೀವರ್ಷವೂ ಚೆನ್ನಾಗಿ ಮಳೆ ಸುರಿದು ಬೆಳೆಗಳು ಸಮೃದ್ದಿಯಾಗಿ ಬರಲಿ ಮತ್ತು ಸಕಲ ಜೀವ ರಾಶಿಗಳು ನೆಮ್ಮದಿಯಾಗಿ ಬದುಕಲೆಂದು ಹಾರೈಸಿ ರೈತರು ಭೂತಾಯಿಗೆ ರೊಟ್ಟಿ, ಚಟ್ನಿ, ಪಲ್ಯ, ಹಪ್ಪಳ, ಸಂಡಿಗೆ, ಉಂಡಿಗಡಬು, ಕರಿಗಡಬು, ಶೇಂಗಾ ಹೋಳಿಗೆ, ಎಳ್ಳು ಹೋಳಿಗೆ ಚೆರಗ ಚೆಲ್ಲಿದರು.ರೈತ ಬಾಂಧವರು ಐದು ಸುತ್ತು ಭೂತಾಯಿಗೆ ಪ್ರದಕ್ಷಿಣಿ ಹಾಕುವ ಮೂಲಕ ಹುಲ್ಲಲಿಗೊ, ಸುರಂಭಳಿಗೊ, ಸುಭ್ಬಲಿಗೊ ಎನ್ನುತ್ತ ಎಡೆಯನ್ನು ಚೆರಗದ ರೂಪದಲ್ಲಿ ಭೂತಾಯಿಗೆ ಸಮರ್ಪಿಸಿದರು.

ತದನಂತರ ರೈತ ಬಾಂಧವರು ಹಾಗೂ ಕುಟುಂಬ ಸದಸ್ಯರು ಎಲ್ಲರೂ ಒಂದು ಕಡೆಗೆ ಕುಳಿತು ಊಟವನ್ನು ಸವಿಯುವ ದೃಶ್ಯವು ಕಂಡು ಬಂದಿತು.
ವರದಿ:ಚಂದ್ರಶೇಖರ ಸೋಮಣ್ಣವರ
