
ಗಜೇಂದ್ರಗಡ: ನರೇಗಾ ಕಾಮಗಾರಿಗಳ ಕೂಲಿಕಾರರ ಹಾಜರಾತಿಯಲ್ಲಿ ಪಾರದರ್ಶಕತೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಕೆಲಸ ಮಾಡುತ್ತಿರುವ ಗಜೇಂದ್ರಗಡ ತಾಲೂಕಿನ ಕೂಲಿಕಾರರಿಗೆ ಇ-ಕೆವೈಸಿ (eKYC) ಪ್ರಕ್ರಿಯೆ ಕಡ್ಡಾಯಗೊಳಿಸಲಾಗಿದೆ. ತಾಲೂಕಿನ ಎಲ್ಲ 13 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿನ ಜಾಬ್ ಕಾರ್ಡ್ ಹೊಂದಿರುವ ನರೇಗಾ ಕೂಲಿಕಾರರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ತಕ್ಷಣ ಪೂರ್ಣಗೊಳಿಸಬೇಕೆಂದು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಕರೆ ನೀಡಿದ್ದಾರೆ.

ತಾಲೂಕಿನ 13 ಗ್ರಾಮ ಪಂಚಾಯತಿಗಳ ಗ್ರಾಮ ಕಾಯಕ ಮಿತ್ರ, ಗಣಕಯಂತ್ರ ನಿರ್ವಾಹಕ, ಬಿಎಫ್ ಟಿ ಮತ್ತು ನೀರುಗಂಟ್ಟಿ ಅವರಿಗೆ ಗೂಗಲ್ ಸಭೆ ಕೈಗೊಳ್ಳುವುದರ ಮೂಲಕ ಕಡ್ಡಾಯವಾಗಿ ಇ-ಕೆವೈಸಿ ಜಾರಿ ಕುರಿತಾದ ಸಭೆಯಲ್ಲಿ ಇಒ ಚಂದ್ರಶೇಖರ್ ಕಂದಕೂರ ಅವರು ಕೆಳ ಹಂತದ ಅಧಿಕಾರಿಗಳಿಗೆ ಸೂಚಿಸಿದರು.ನರೇಗಾ ಕಾಮಗಾರಿಗಳ ಕೂಲಿಕೆಲಸದಲ್ಲಿ ಕೂಲಿಕಾರರ ಹಾಜರಾತಿ ಕುರಿತು ಅನೇಕ ಸಮಸ್ಯೆಗಳು ಮತ್ತು ದೂರುಗಳು ಕೇಳಿ ಬಂದಿದ್ದವು. ಹೀಗಾಗಿ ಕೂಲಿಕಾರರ ಹಾಜರಾತಿಯಲ್ಲಿ ಪಾರದರ್ಶಕತೆ ತರುವಲ್ಲಿ ಕೇಂದ್ರ ಸರ್ಕಾರ ನರೇಗಾ ಕೂಲಿಕಾರರ ಹಾಜರಾತಿಯಲ್ಲಿ ಕಡ್ಡಾಯವಾಗಿ ಇ-ಕೆವೈಸಿ ಜಾರಿಗೊಳಿಸಿದೆ. ಕೇಂದ್ರ ಸರ್ಕಾರದ ಆದೇಶದನ್ವಯ ಗಜೇಂದ್ರಗಡ ತಾಲೂಕಿನ ನರೇಗಾ ಎಲ್ಲ ಕೂಲಿಕಾರರಿಗೆ 13 ಗ್ರಾಮ ಪಂಚಾಯತಿಗಳ ಗ್ರಾಮ ಕಾಯಕ ಮಿತ್ರ, ಗಣಕಯಂತ್ರ ನಿರ್ವಾಹಕ, ಬಿಎಫ್ ಟಿ ಮತ್ತು ನೀರುಗಂಟ್ಟಿ ಅವರು ಇ-ಕೆವೈಸಿ ಮಾಡಿಸಬೇಕೆಂದು ತಾಕೀತು ಮಾಡಿದರು.ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಬಂದ ಸೂಚನೆಯಂತೆ, ಸೆಪ್ಟೆಂಬರ್ 30, 2025ರೊಳಗೆ ಎನ್ಎಂಎಂಎಸ್ (ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್) ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯವಾಗಿದೆ. ಆದರೆ, ಗಜೇಂದ್ರಗಡ ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಕೂಲಿಕಾರರು ಈ ಪ್ರಕ್ರಿಯೆ ಪೂರ್ಣಗೊಳಿಸದಿರುವುದರಿಂದ, ತಾಲೂಕ ಪಂಚಾಯತಿಯ ಐಇಸಿ ಚಟುವಟಿಕೆಗಳ ಮೂಲಕ ವ್ಯಾಪಕ ಜಾಗೃತಿ ಕಾರ್ಯಕ್ರಮಗಳ ಕುರಿತು ವಿಡಿಯೋ ಮತ್ತು ಆಡಿಯೋ ಧ್ವನಿ ಪ್ರಚಾರಕ್ಕೆ ಪರಿಕರಗಳನ್ನು ಸಿದ್ಧಪಡಿಸಿಲಾಗಿದೆ. ಇವುಗಳನ್ನು ಬಳಸಿಕೊಂಡು ನರೇಗಾ ಕೂಲಿಕಾರರಲ್ಲಿ ಇ-ಕೆವೈಸಿ ಕಡ್ಡಾಯ ಬಗ್ಗೆ ಜಾಗೃತಿ ಮೂಡಿಸಿ ಕ್ರಮವಹಿಸುವಂತೆ ತಿಳಿಸಿದರು.

ಸಭೆಯಲ್ಲಿದ್ದ ತಾಲೂಕು ಪಂಚಾಯತ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಬಸವರಾಜ ಬಡಿಗೇರ್ ಅವರು ಮಾತನಾಡಿ, ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದರೆ ಕೂಲಿ ಪಾವತಿಯಲ್ಲಿ ವೇಗ ಮತ್ತು ಪಾರದರ್ಶಕತೆ ಹೆಚ್ಚುತ್ತದೆ. ಜೊತೆಗೆ, ಕಾರ್ಮಿಕರ ಹಾಜರಾತಿಯನ್ನು ಮುಖ ಆಧಾರಿತ (Face Authentication) ತಂತ್ರದ ಮೂಲಕ ಎನ್ಎಂಎಂಎಸ್ ಅಪ್ಲಿಕೇಶನ್ನಲ್ಲಿ ನಿಖರವಾಗಿ ದಾಖಲಿಸಬಹುದು. ಇದು ನರೇಗಾ ಯೋಜನೆಯ ವಿಶ್ವಾಸಾರ್ಹತೆ ಮತ್ತು ಪರಿಣಾಮಕಾರತೆಯನ್ನು ಹೆಚ್ಚಿಸುತ್ತದೆ. ಸದ್ಯದಲ್ಲೇ ಎನ್ಎಂಎಂಎಸ್ ಅಪ್ಲಿಕೇಶನ್ನಲ್ಲಿ ಕಾರ್ಮಿಕರ ಫೋಟೋ ಸೆರೆಹಿಡಿದು, ಆಧಾರ್ ಸಂಖ್ಯೆಯೊಂದಿಗೆ ಮುಖ ಹೊಂದಾಣಿಕೆ ಮೂಲಕ ಹಾಜರಾತಿ ದೃಢಪಡಿಸಲಾಗುತ್ತಿದೆ. ಇ-ಕೆವೈಸಿ ಪೂರ್ಣಗೊಳಿಸದ ಕಾರ್ಮಿಕರ ಹಾಜರಾತಿಯನ್ನು ಮುಂದಿನ ದಿನಗಳಲ್ಲಿ ಪರಿಗಣಿಸಲಾಗುವುದಿಲ್ಲ ಎಂದರು.
ಗಜೇಂದ್ರಗಡ ತಾಲೂಕಿನ ಒಟ್ಟು 13 ಗ್ರಾಮ ಪಂಚಾಯತಿಗಳಲ್ಲಿ 17969 ಕುಟುಂಬಗಳಿದ್ದು 48543 ನೊಂದಣಿ ಆದ ಕೂಲಿಕಾರರು ಇದ್ದು, ಅದರಲ್ಲಿ 37306 ಸಕ್ರಿಯ ಕೂಲಿಕಾರರು ಇರುತ್ತಾರೆ. ಸಕ್ರೀಯ 37306 ನರೇಗಾ ಕೂಲಿಕಾರರ ಇ-ಕೆವೈಸಿ ಮಾಡಿಕೊಳ್ಳುವುದು ಕಡ್ಡಾಯ. ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಎಲ್ಲ ಕಾರ್ಮಿಕರು ತಕ್ಷಣ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಗೂಗಲ್ ಸಭೆಯಲ್ಲಿ ತಾಲೂಕ ಪಂಚಾಯತ್ನ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಚಂದಚ್ರಶೇಖರ್,ಬಿ ಕಂದಕೂರ ಮತ್ತು ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಬಸವರಾಜ ಬಡಿಗೇರ ಅವರು ಜಂಟಿಯಾಗಿ ಮನವಿ ಮಾಡಿದರು.
ಸಭೆಯಲ್ಲಿ ತಾಲೂಕು ಮಟ್ಟದ ನರೇಗಾ ಸಿಬ್ಬಂದಿಗಳಾದ, ಐಇಸಿ ಸಂಯೋಜಕರು, ತಾಂತ್ರಿಕ ಸಂಯೋಜಕರು, ಎಂಐಎಸ್ ಸಂಯೋಜಕರು ಹಾಜರಿದ್ದರು. ಜಿಲ್ಲಾ ಪಂಚಾಯತ ನರೇಗಾ ವಿಭಾಗದ ಎಡಿಪಿಸಿ ಕಿರಣಕುಮಾರ್ ಅವರು ಸಭೆಯಲ್ಲಿ ಭಾಗವಹಿಸಿ ಇ-ಕೆವೈಸಿ ಕಡ್ಡಾಯ ಕುರಿತು ಹೆಚ್ಚಿನ ಮಾಹಿತಿ ನೀಡಿದರು.
