ಗಜೇಂದ್ರಗಡ:ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಅನ್ಯ ಜಾತಿಗಳ ಸೇರಿಸುವ ಪ್ರಸ್ತಾವ ವಿರೋಧಿಸಿ ತಾಲೂಕು ವಾಲ್ಮೀಕಿ ನಾಯಕ ಸಮಾಜದಿಂದ ನಡೆದ ಪ್ರತಿಭಟನಾ ಮೆರವಣಿಗೆ ಕಾಲಕಾಲೇಶ್ವರ ವೃತ್ತದಿಂದ ಹೊರಟು ತಹಶೀಲ್ದಾರ್ ಕಚೇರಿಯ ವರೆಗೆ ಸರಕಾರದ ವಿರುದ್ದ ಘೋಷಣೆ ಕೂಗುತ್ತಾ ನಡೆಯಿತು.

ಈ ವೇಳೆ ವಾಲ್ಮೀಕಿ ಸಮಾಜದ ಅಧ್ಯಕ್ಷ ಭೀಮಣ್ಣ ತಳವಾರ ಮಾತನಾಡಿ, ಪರಿಶಿಷ್ಟ ಪಂಗಡ ಸಮುದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಔದ್ಯೋಗಿಕವಾಗಿ ಹಿಂದುಳಿದಿದೆ. ಆದರೆ, ಕುರುಬ ಸಮುದಾಯ ಎಲ್ಲ ಕ್ಷೇತ್ರಗಳಲ್ಲೂ ಸದೃಢವಾಗಿದೆ. ಹೀಗಿರುವಾಗ ಸದೃಢ ಸಮುದಾಯವನ್ನು ಹಿಂದುಳಿದ ಎಸ್ಟಿ ಪಟ್ಟಿಗೆ ಸೇರಿಸುವುದು ಸಂವಿಧಾನ ವಿರೋಧವಾಗಿದೆ ಎಂದರು.
ಯಾವುದೇ ಕಾರಣಕ್ಕೂ ಅನ್ಯ ಸಮುದಾಯಗಳನ್ನು ಎಸ್ಟಿಗೆ ಸೇರಿಸಬಾರದು. ಅಲ್ಲದೇ ರಾಜ್ಯ ಸರ್ಕಾರದಿಂದ ಎಸ್ಟಿ ಸಮುದಾಯಕ್ಕೆ ಸಮರ್ಪಕವಾಗಿ ಸೌಲಭ್ಯಗಳು ದೊರೆಯುತ್ತಿಲ್ಲ ಮತ್ತು ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರದಿಂದ ನಮ್ಮ ಸಮುದಾಯ ಇನ್ನಷ್ಟು ಕುಗ್ಗಿ ಹೋಗಿದೆ ಎಂದರು.

ಸಮಾಜದ ಮುಖಂಡ, ಬಾಲಚಂದ್ರ ವಾಲ್ಮೀಕಿ ಮಾತನಾಡಿ, ಎಲ್.ಜಿ. ಹಾವನೂರು ವರದಿಯಂತೆ ಶೇ 7.5 ಮೀಸಲಾತಿ ಕೊಡುವುದಾಗಿ ಹೇಳಿದ್ದ ಸರ್ಕಾರ ಈವರೆಗೂ ಈಡೇರಿಸಿಲ್ಲ. ಆದರೆ, ಇತರ ಜಾತಿಗಳನ್ನು ಎಸ್ಟಿಗೆ ಸೇರಿಸುವ ಹುನ್ನಾರ ಮಾತ್ರ ನಡೆಸುತ್ತಿದೆ. ಕೂಡಲೇ ಸರ್ಕಾರ ಎಚ್ಚೆತ್ತು 7.5% ಇರುವ ನಮ್ಮ ಮೀಸಲಾತಿಯನ್ನು 25% ಹೆಚ್ಚಿಸಿ ಉಳಿದ ಜನಾಂಗಗಳನ್ನು ಎಸ್ಟಿ ಗೆ ಸೇರಿಸಲಿ ಎಂದರು.
ನಂತರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹನಮಂತಪ್ಪ ಹಟ್ಟಿಮನಿ, ಬಾಲಚಂದ್ರ ವಾಲ್ಮೀಕಿ ,ಮಂಜು ಶಿಗ್ಲಿ,ಪ್ರಕಾಶ್ ತಳವಾರ,ಎಂ ಎಚ್ ರಂಗನವರ, ,ದುರಗೇಶ್ ಜಿ,ಅಂದಪ್ಪ ವಾಲ್ಮೀಕಿ,ಯಮನೂರಪ್ಪ ತಳವಾರ,ನಾಗರಾಜ್ ತಳವಾರ,ರಾಜಕುಮಾರ ಕೆ,ಕೃಷ್ಣಾ ಜುಟಲ್,ಶೇಕಪ್ಪ ಜುಟಲ್,ಶರಣಪ್ಪ ತಳವಾರ,ಅಂದಪ್ಪ ತಳವಾರ,ಸುಭಾಷ್ ಮಾಡಲಗೇರಿ,ಮುತ್ತಣ್ಣ ಲೇವಕ್ಕಿ ಇತರರು ಉಪಸ್ಥಿತರಿದ್ದರು.
