ಗಜೇಂದ್ರಗಡ:ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆ ಮೂಡಿಸುವುದಕ್ಕೆ, ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕಾಗಿ ಎನ್ಎಸ್ಎಸ್ ಶಿಬಿರ ನಡೆಯುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ಇದರ ಅನುಭವ ಪಡೆದುಕೊಳ್ಳಬೇಕೆಂದು ಎಸ್ಡಿಎಂಸಿ ಅಧ್ಯಕ್ಷ ಹನುಮಂತ ರಾಮಜಿ ಹೇಳಿದರು.
ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಮಂಗಳವಾರ ಆರಂಭಗೊಂಡ ಕನಕದಾಸ ಪದವಿ ಕಾಲೇಜಿನ ಎನ್ಎಸ್ಎಸ್ ಶಿಬಿರದಲ್ಲಿ ಅವರು ಮಾತನಾಡಿದರು.

ಶಿಕ್ಷ ಣ ಹೇರಿಕೆ ಆಗಬಾರದು, ಪಠ್ಯ ಶಿಕ್ಷ ಣ ಜತೆ ಸಮುದಾಯದ ಪರಿಚಯ, ಸೇವೆ ಮೂಲಕ ಸ್ವಚ್ಛತೆ ಅರಿವು, ನಮ್ಮಲ್ಲಿನ ಸಂಸ್ಕೃತಿ ಪ್ರದರ್ಶನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಸಹ ಭೋಜನ, ಕ್ರೀಡೆ ಮೂಲಕ ಸಮಗ್ರತೆ ಪರಿಕಲ್ಪನೆ ಹೀಗೆ ಹಲವು ಚಿಂತನೆ ಸಾಕಾರಕ್ಕಾಗಿ ಶಿಬಿರ ನಡೆಯುತ್ತದೆ. ಅದನ್ನು ಅರ್ಥ ಮಾಡಿಕೊಂಡು ಎಲ್ಲ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದರು.
ಪ್ರಾಚಾರ್ಯರು ಎಚ್ ಎಮ್ ಗೌಡರ ಮಾತನಾಡಿ, ಉದ್ಯೋಗ ಪಡೆಯುವುದಕ್ಕೆ ಪಠ್ಯ ನೆರವಿಗೆ ಬಂದರೆ, ಜೀವನ ನಡೆಸುವುದಕ್ಕೆ ಪಠ್ಯೇತರ ಚಟುವಟಿಕೆ ಸಹಕಾರಿ ಆಗುತ್ತದೆ. ಶಿಬಿರದ ಪ್ರತಿಕ್ಷಣ ತಮ್ಮನ್ನು ತೊಡಗಿಸಿಕೊಳ್ಳಬೇಕು. ಆಗ ಸಾರ್ಥಕತೆ ಸಿಗುತ್ತದೆ ಎಂದರು.

ಎನ್ಎಸ್ಎಸ್ ಯೋಜನಾಧಿಕಾರಿ ದೇವು ಕಟ್ಟಿಮನಿ ಮಾತನಾಡಿ, ಕಲಿಕೆ ವಿದ್ಯಾರ್ಥಿ, ಶಿಕ್ಷಕರ ನಡುವಿನ ಕೊಂಡಿ ಆಗಿರದೆ ಸಮುದಾಯದ ನಡುವೆಯೂ ರಚನಾತ್ಮಕ ಸಂಬಂಧ ಏರ್ಪಡಬೇಕು ಎನ್ನುವ ಆಶಯದೊಂದಿಗೆ ಎನ್ಎಸ್ಎಸ್ ಶಿಬಿರ ನಡೆಸಲಾಗುತ್ತದೆ. ಗ್ರಾಮದ ಸ್ವಚ್ಛತೆ ಕೆಲಸದ ಜತೆ ಗ್ರಾಮೀಣರಲ್ಲಿ ಆರೋಗ್ಯ ಅರಿವು, ಮೌಢ್ಯತೆ ಹೋಗಲಾಡಿಸುವುದು, ಕಂದಾಚಾರಕ್ಕೆ ವಿರುದ್ಧವಾಗಿ ಯುವಕರ ಪ್ರೇರಣೆ ಹೀಗೆ ಹಲವು ಮಾರ್ಗದಲ್ಲಿ ಯುವ ಜನತೆ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ನಿರ್ಮಲಾ ಸೊಲಬಗೌಡರ,ಪ್ರದೀಪ್ ಹೂಲ್ಲೂರ,ಎಲ್ ಕೆ ಚಂದುಕರ್, ಬಸಯ್ಯ ಕಪ್ಲಿಮಠ, ಸೋಮಯ್ಯ ಬಾಳಿಕಾಯಿಮಠ, ಈರಪ್ಪ ತೋಟದ, ಮಲ್ಲಯ್ಯ ಹಿರೇಮಠ, ರಮೇಶ್ ರಾಮಜಿ ವಿದ್ಯಾರ್ಥಿಗಳು, ಗ್ರಾಮಸ್ಥರು ಮತ್ತಿತರರು ಇದ್ದರು
